ಎಫಿಮಿರಾಪ್ಟೆರ 
	ರೆಕ್ಕೆಯುಳ್ಳ ಕೀಟಗಳ ಒಂದು ಗಣ. ಉದಾಹರಣೆ-ಮೇ ಫ್ಲೈ ಅಥವಾ ಡೇ ಫ್ಲೈ ಇವು ಅನೇಕ ರೀತಿಯಿಂದ ವಿಶಿಷ್ಟವಾಗಿವೆ. ಎಫಿಮಿರಾಪ್ಟೆರ ಎಂಬ ಹೆಸರು ಈ ಜೀವಿಗಳ ಕ್ಷಣಿಕಜೀವನ ವ್ಯಾಪ್ತಿಯನ್ನು ಸೂಚಿಸುತ್ತದೆ. ಇವುಗಳ ಶರೀರ ಬಲು ಮೃದು. ಮೀಸೆ ಬಹಳ ಚಿಕ್ಕದು. ಸ್ವಾಹಾಂಗಗಳು ಕ್ಷೀಣಿಸಿಹೋಗಿವೆ. ಎರಡು ಜೊತೆ ತೆಳ್ಳನೆಯ ರೆಕ್ಕೆಗಳಿವೆ. ಹಿಂದಿನ ಜೊತೆ ಬಹಳ ಚಿಕ್ಕದು. ಕೀಟ ಕುಳಿತಾಗ ರೆಕ್ಕೆಗಳೂ ಲಂಬವಾಗಿ ನಿಂತಿರುತ್ತವೆ. ಉದರದ ಹಿಂಭಾಗದಲ್ಲಿನ ಉದ್ದವಾದ ಗುದಕುಡಿಯಿಂದ ಇವನ್ನು ಸುಲಭವಾಗಿ ಗುರುತಿಸಬಹುದು. 

	ಪ್ರೌಢಾವಸ್ಥೆಯಲ್ಲಿರುವ ಕೀಟಗಳು ಸಾಮಾನ್ಯವಾಗಿ ನೀರಿನ ಸುತ್ತಮುತ್ತ ಹಾರಾಡುತ್ತಿರುತ್ತವೆ. ಇವುಗಳ ಲಾರ್ವಾಗಳನ್ನು 'ನಿಂಫ್ ಎಂದು ಕರೆಯುತ್ತೇವೆ. ಇವು ಸಸ್ಯಹಾರಿಗಳಾಗಿದ್ದು, ನೀರಿನಲ್ಲಿರುವ ಸಸ್ಯಗಳ ಸಂಖ್ಯಾ ನಿಯಂತ್ರಣಕ್ಕೆ ಸಹಾಯಕಾರಿ. ಒಂದರಿಂದ ಮೂರು ವರ್ಷಗಳವರೆಗೂ ನಿಂಫ್ ಹಂತದಲ್ಲಿ ಜಲವಾಸಿಗಳಾಗಿದ್ದು ಸುಮಾರು 24 ಬಾರಿ ತಮ್ಮ ಹೊರಕವಚವನ್ನು ಕಳಚಿ ಪ್ರೌಢಾವಸ್ಥೆ ತಲುಪುತ್ತವೆ. ಬೆಳೆದ ಕೀಟ ಕೆಲ ಗಂಟೆಗಳು ಅಥವಾ ಒಂದೆರಡು ದಿನ ಬದುಕಿದ್ದರೆ ಹೆಚ್ಚು. ಮೊಟ್ಟೆ ಇಟ್ಟ ನಂತರ ಹೆಣ್ಣು ಅಸು ನೀಗುತ್ತದೆ. ಹೆಣ್ಣಿನೊಂದಿಗೆ ಕೂಡಿದ ನಂತರ ಗಂಡು ನೀರಿಗೆ ಬಿದ್ದು ಸಾಯುತ್ತದೆ. 	ಎಫಿಮಿರಾಪ್ಟೆರ ಗಣದಲ್ಲಿ ಸುಮಾರು 1,800 ಪ್ರಭೇದಗಳನ್ನು ಗುರುತಿಸಿದ್ದಾರೆ. ಉತ್ತರ ಅಮೇರಿಕದಲ್ಲಿ 500 ಪ್ರಭೇದಗಳನ್ನು ಗುರುತಿಸಲಾಗಿದೆ. ಬ್ರಿಟಿಷ್ ದ್ವೀಪಗಳಲ್ಲಿ 48 ಪ್ರಬೇಧಗಳು ದೊರಕಿವೆ. ಏಷ್ಯ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಗಳಲ್ಲಿ ಇನ್ನೂ ಅe್ಞÁತವಾಗಿರುವ ಪ್ರಭೇದಗಳು ವಿಪುಲವಾಗಿರುವಂತಿದೆ. 						(ಜಿ.ಪಿ.ಸಿ.)

	ಆಫ್ರಿಕಾದಲ್ಲಿರುವ ಅತ್ಯಂತ ದೊಡ್ಡದಾದ ವಿಕ್ಟೋರಿಯಾ ಸರೋವರವನ್ನು 'ಮೇ ಫ್ಲೈಗಳ ಸರೋವರ ಎಂದೇ ಕರೆಯುತ್ತಾರೆ. ಕೆಲವೊಂದು ಋತುಗಳಲ್ಲಿ ಕೋಟ್ಯಾಂತರ ಮೇ ಫ್ಲೈಗಳು ಸರೋವರದ ಮೇಲೆ ಗುಂಪುಗೂಡಿ ಹಾರಾಡುವಾಗ ಬೆಂಕಿಯಿಲ್ಲದ ಹೊಗೆ ಎದ್ದಂತೆಯೇ ಕಾಣುತ್ತದೆ. ದಟ್ಟವಾದ ಮೋಡ ಕವಿದಂತಹ ಅನುಭವ ತರಿಸುವ ಈ ದೃಶ್ಯ ದೋಣಿ ವಿಹಾರ ಮತ್ತು ಮೀನು ಹಿಡಿಯಲು ಅಡಚಣೆಯಾಗುವುದೆಂದು ದಾಖಲಿಸಲಾಗಿದೆ. ಈ ಹಾರಾಟ ಪ್ರಣಯ ಕೇಳಿ ನರ್ತನವಷ್ಟೇ. ಸರೋವರದ ಬಳಿ ವಾಸಿಸುವ ಜನ ದೊಡ್ಡ ದೊಡ್ಡ ಬಲೆಗಳನ್ನು ಬೀಸಿ ಮೇ ಫ್ಲೈಗಳನ್ನು ಹಿಡಿದು ಬೋಂಡದಂತಹ ಕರಿದ ತಿಂಡಿಯನ್ನು ಮಾಡಿ ತಿನ್ನುತ್ತಾರೆ.
	
(ಪರಿಷ್ಕರಣೆ: ಡಾ.ಎನ್.ಎಸ್.ಲೀಲಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ